Tuesday, August 25, 2015

ವರಮಹಾಲಕ್ಷ್ಮೀ ಅಡುಗೆಗಳು

ಶ್ರಾವಣಮಾಸವೆಂದರೆ ಒಂಥರದಲ್ಲಿ ಲಕ್ಷ್ಮೀ ಹಬ್ಬವೆಂದೇ ಹೇಳಬಹುದು. ಹಬ್ಬಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಈ ವರಮಹಾಲಕ್ಷ್ಮಿಗಿದೆ. ಹಳೆಮೈಸೂರು ಪ್ರಾಂತ್ಯದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಬೆಂಗಳೂರಿನ ನಿವಾಸಿ ಸಾವಿತ್ರಿ ಮೂಲತಃ ಹಾಸನಜಿಲ್ಲೆಯವರಾಗಿದ್ದು, ಎಲ್ಲ ರೀತಿಯ ಹಬ್ಬಹರಿದಿನಗಳನ್ನು ಆಚರಿಸುತ್ತಾರೆ. ಹಾಗೆ ವರಮಹಾಲಕ್ಷ್ಮೀ ಹಬ್ಬದಂದು  ಮಾಡುವ ವಿಶೇಷ ಅಡುಗೆಗಳ ಪರಿಚಯವನ್ನು ಇಲ್ಲಿ ಮಾಡಿಕೊಟ್ಟಿದ್ದಾರೆ.
 ಒಬ್ಬಟ್ಟು:

ಸಾಮಗ್ರಿ: ಕಡ್ಲೆಬೇಳೆ, ತೊಗರಿಬೇಳೆ - ಎರಡೂ ಅರ್ಧರ್ಧ ಲೋಟ, ಬೆಲ್ಲ - ಕಾಲುಕೆಜಿ, ಏಲಕ್ಕಿ ಸ್ವಲ್ಪ. ಕಾಯಿತುರಿ - ಅರ್ಧಹೋಳು.
ಕಣಕಕ್ಕೆ: ಮೈದಾಹಿಟ್ಟು - ಕಾಲುಕೆಜಿ. ಚಿರೋಟಿ ರವೆ - ಕಾಲುಕೆಜಿ, ಅರಿಶಿಣ ಪುಡಿ ಚಿಟಿಕೆ. ಎಣ್ಣೆ.
ವಿಧಾನ: ಮೈದಾಹಿಟ್ಟು, ಚಿರೋಟಿ ರವೆಯನ್ನು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಎಣ್ಣೆ ಹಾಕಿ ಚೆನ್ನಾಗಿ ನಾದಿ, ಬಟ್ಟೆ ಮುಚ್ಚಿ, ಒಂದು ಗಂಟೆ ನೆನೆಯಲು ಬಿಡಿ.
ಹೂರಣಕ್ಕೆ : ಕಡ್ಲೆಬೇಳೆ ಮತ್ತು ತೊಗರಿಬೇಳೆಯನ್ನು ಬೇಯಿಸಿ, ಆರಿದ ಮೇಲೆ ಕಾಯಿತುರಿ, ಏಲಕ್ಕಿ ಪುಡಿ, ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಬೆಲ್ಲ ಹಾಕಿ ಗಟ್ಟಿಯಾಗುವವರೆಗೂ ತೊಳಸಿ ಇಳಿಸಿ. ಆರಿದ ಮೇಲೆ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಕಣಕದಲ್ಲಿ ತುಂಬಿ ಚಪಾತಿಯ ಆಕಾರಕ್ಕೆ ತಟ್ಟಿ ತವಾದ ಮೇಲೆ ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿ.

ಆಂಬೊಡೆ:
ಸಾಮಗ್ರಿ: ಕಡ್ಲೆಬೇಳೆ - ಅರ್ಧ ಕೆಜಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು - ಕಟ್ಟು, ಸಬ್ಸಿಗೆ ಸೊಪ್ಪು - ಅರ್ಧಕಟ್ಟು. ಉಪ್ಪು ರುಚಿಗೆ. ಇಂಗು - ಸ್ವಲ್ಪ.
ವಿಧಾನ : ಕಡ್ಲೆಬೇಳೆಯನ್ನು ತಾಸು ನೆನೆಹಾಕಿ. ಅದಕ್ಕೆ ಸ್ವಲ್ಪ ಇಂಗು, ಹಸಿಮೆಣಸಿನಕಾಯಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕೊತ್ತಂಬರಿಸೊಪ್ಪು ಹಾಗೂ ಸಬ್ಸಿಗೆ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿ ಕಲಸಿಕೊಳ್ಳಿ. ಅದಕ್ಕೆ ಉಪ್ಪು ಸೇರಿಸಿ. ನಂತರ ಚಿಕ್ಕಚಿಕ್ಕ ಉಂಡೆಗಳನ್ನು ಮಾಡಿ ತಟ್ಟಿ ವಡೆರೀತಿಯಲ್ಲಿ ಕರಿಯಿರಿ.

ಕಾಯಿಕಡುಬು
ಸಾಮಗ್ರಿ: ಅಕ್ಕಿಹಿಟ್ಟು, ಕಾಯಿತುರಿ, ಬೆಲ್ಲ.ಏಲಕ್ಕಿ ಪುಡಿ.
ವಿಧಾನ: ಪಾತ್ರೆಯಲ್ಲಿ ನೀರು ಕಾಯಲು ಇಡಿ. ಕಾದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು ಹಾಕಿ, ಅಕ್ಕಿಹಿಟ್ಟನ್ನು ಹಾಕಿ ಚೆನ್ನಾಗಿ ಕಲಕಿ. ಅದು ಗಟ್ಟಿಯಾಗಿ ಮುದ್ದೆಯ ರೀತಿಯಲ್ಲಿ ಆಗುತ್ತದೆ. ಆಗ ಇಳಿಸಿ ಸ್ವಲ್ಪ ಆರಿದ ಮೇಲೆ ಚೆನ್ನಾಗಿ ಕಲಸಿ ನಂತರ ನಾದಿ. ನಂತರ ಚಿಕ್ಕಚಿಕ್ಕ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ. ಕಾಯಿತುರಿಗೆ ಬೆಲ್ಲ ಅಥವಾ ಸಕ್ಕರೆ ಹಾಕಿ ಕಲಸಿಕೊಳ್ಳಿ. ಬೆಲ್ಲ ಆದರೆ ಸ್ವಲ್ಪ ಬಿಸಿ ಮಾಡಿ ಹಾಕಿ. ಸಕ್ಕರೆಯಾದರೆ ಬಿಸಿ ಮಾಡುವ ಅಗತ್ಯವಿಲ್ಲ. ಇದನ್ನು ಸ್ವಲ್ಪ ಅಕ್ಕಿಹಿಟ್ಟಿಗೆ ಹಾಕಿ ಕಡುಬಿನ ರೀತಿ ತುಂಬಿ ಹಬೆಯಲ್ಲಿ ಬೇಯಿಸಿ.

ಖಾರಾ ಕಡಬು
ಸಿಹಿಗಡುಬಿನ ಹಿಟ್ಟನ್ನೇ ಖಾರಕ್ಕೂ ಬಳಸಬಹುದು. ಖಾರದ ಹೂರಣ ಬೇರೆ ಅಷ್ಟೇ. ಇದಕ್ಕೆ ಉದ್ದಿನ ಬೇಳೆಯನ್ನು ನೆನೆಸಿ ಚೆನ್ನಾಗಿ ರುಬ್ಬಿಕೊಳ್ಳಿ. ಹಸಿಮೆಣಸಿನಕಾಯಿ, ಉಪ್ಪು, ಸ್ವಲ್ಪ ರವೆ ಸೇರಿಸಿ ಅಕ್ಕಿಹಿಟ್ಟಿನ ಬಿಲ್ಲೆಗೆ ತುಂಬಿ ಹಬೆಯಲ್ಲಿ ಚೆನ್ನಾಗಿ ಬೇಯಿಸಿ. ಇದು ಕಾಯಿಚಟ್ನಿಯೊಂದಿಗೆ ತಿನ್ನಲು ಬಲು ರುಚಿ.